ಮೂರ್ ತಾಮಸ್
1779-1852. ಐರ್ಲೆಂಡ್ ದೇಶದ ಇಂಗ್ಲಿಷ್ ಕವಿ. ಗೀತರಚನಕಾರ; ಹಾಗೂ ಗಾಯಕ. ಹುಟ್ಟಿದ್ದು ಡಬ್ಲಿನ್‍ನಲ್ಲಿ. ತಂದೆ ಜಾನ್ ಮೂರ್ ಕಿರಾಣಿ ಮತ್ತು ವೈನ್ ವ್ಯಾಪಾರಿ. ತಾಯಿ ಅನಾಸ್ತೇಶಿಯಾ ಕಾಡ್. 

	1798ರಲ್ಲಿ ಈತ ಪದವೀಧರನಾದ. ಕ್ಲಾಸಿಕಲ್ ಗ್ರೀಕ್‍ನಲ್ಲಿ ಪಾಂಡಿತ್ಯವನ್ನೂ ಪಡೆದ. ಮರುವರ್ಷ ಇಂಗ್ಲೆಂಡಿಗೆ ಹೋಗಿ ಮಿಡ್ಲ್‍ಟೆಂಪಲ್‍ನಲ್ಲಿ ಕಾನೂನು ತರಬೇತಿ ಪಡೆಯತೊಡಗಿದ. ಆ ವೇಳೆಗಾಗಲೆ ಅವನು ಇಂಗ್ಲಿಷಿಗೆ ಭಾಷಾಂತರಿಸಿದ್ದ ಓಡ್ಸ್ ಆಫ್ ಅನಾಕ್ರಿಯೋನ್ ಎಂಬ ಗ್ರೀಕ್ ಕವನಗಳ ಸಂಕಲನ ಜನರ ಗಮನವನ್ನು ಸೆಳೆದಿತ್ತು.	
ಅಮೆರಿಕ, ಕೆನಡ ದೇಶಗಳನ್ನು ಸುತ್ತಿ ಇಂಗ್ಲೆಂಡಿಗೆ ಹಿಂದಿರುಗಿದ. 1806ರಲ್ಲಿ ಎಪಿಸಲ್ಸ್; ಓಡ್ಸ್ ಅಂಡ್ ಅದರ್ ಪೊಯೆಮ್ಸ್ ಎಂಬ ಎರಡು ಕೃತಿಗಳನ್ನು ಪ್ರಕಟಿಸಿದ. ತಾಮಸ್ ಲಿಟ್ಲ್ ಬರೆದವು ಎಂಬ ಕೆಲವು ಪ್ರೇಮಗೀತೆಗಳು, ಹೆಚ್ಚಾಗಿ ಪ್ರವಾಸದ ಅನುಭವಗಳ ಕವನಗಳು ಈ ಸಂಕಲನದಲ್ಲಿವೆ. ಜೊತೆಗೆ ವಿಡಂಬನಕವಿತೆಗಳೂ ಇದ್ದು ಅವು ಪ್ರಖ್ಯಾತವಾದವು. ಎಲಿಜಬೆತ್ ಡೈಕ್ ಎಂಬ ನಟಿಯನ್ನು 1811ರಲ್ಲಿ ಮದುವೆಯಾದ. 

	ಈತ ತಾನು ರಚಿಸಿದ ಗೀತೆಗಳಿಗೆ ತಾನೇ ರಾಗ ಹಾಕಿ ಹಾಡುತ್ತಿದ್ದ. ತುಂಬಾ ಚೆನ್ನಾಗಿ ಹಾಡುತ್ತಿದ್ದುದರಿಂದ ಈ ಗೀತೆಗಳು ಅತ್ಯಂತ ಜನಪ್ರಿಯವಾದವು. ಈತನೇ ಹಾಡಬೇಕು ಎಂಬ ನಿಬಂಧನೆಯನ್ನೂ ಪ್ರಕಾಶಕರು ತಮ್ಮ ಕರಾರಿನಲ್ಲಿ ಸೇರಿಸುತ್ತಿದ್ದರು. ಐರಿಷ್ ಮೆಲೊಡೀಸ್ ಇಂಥ ಒಂದು ಜನಪ್ರಿಯವಾದ ಗೀತ ಸಂಕಲನ. ಅಲ್ಲದೆ ಜನಪ್ರಿಯವಾಗಿದ್ದ ಐರಿಷ್ ರಾಗಬಂಧಗಳಿಗೆ ಸಾಹಿತ್ಯ ಜೋಡಿಸುವ ಕಾರ್ಯಕ್ಕೂ ತೊಡಗಿದ. 1824ರಲ್ಲಿ ಸೇಕ್ರೆಡ್ ಸಾಂಗ್ಸ್ ಸಂಕಲನವನ್ನು ಹೊರತಂದ. 1818ರಲ್ಲಿ ಬೇರೆ ಬೇರೆ ರಾಷ್ಟ್ರಗಳಿಂದ ಸಂಗ್ರಹಿಸಿ ಆಯ್ದ ಶ್ರೇಷ್ಠವಾದ ಹಾಡುಗಳನ್ನು ನ್ಯಾಷನಲ್ ಏರ್ಸ್ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಇದರಿಂದ ಮೂರನಿಗೆ ಪ್ರಖ್ಯಾತಿ ಹಾಗೂ ಹಣ ಎರಡೂ ಲಭಿಸಿದವು.

	1822ರಲ್ಲಿ ಲವ್ಸ್ ಆಫ್ ದಿ ಎಂಜಲ್ಸ್ ಎಂಬ ಪೌರ್ವಾತ್ಯಕಥಾವಸ್ತುವುಳ್ಳ ಇನ್ನೊಂದು ಕಾವ್ಯವನ್ನು ಬರೆದ. 1814ರಲ್ಲಿ ಆಲೋಚಿಸಿದ ಮೆಮ್ಟಾರ್ಸ್ ಆಫ್ ದಿ ಲೈಫ್ ಷೆರಿಡನ್ ಗ್ರಂಥವನ್ನು ಬರೆದು 1825ರಲ್ಲಿ ಪ್ರಕಟಿಸಿದ. ದಿ ಮೆಮ್ಟಾರ್ಸ್ ಆಫ್ ಕ್ಯಾಪ್ಟನ್ ರಾಕ್ ಎಂಬುದು ಇಂಗ್ಲಿಷರ ಅಸಮರ್ಥ ಐರ್ಲೆಂಡ್ ಆಳ್ವಿಕೆಯನ್ನು ಲೇವಡಿ ಮಾಡಿ ಬರೆದ ವಿಡಂಬನೆ. ಇದಕ್ಕೆ ವಾಸ್ತವ ಘಟನೆಗಳ ಆಧಾರವಿತ್ತು.
	1852ರಲ್ಲಿ ತಾಮಸ್ ಮೂರ್ ಮರಣ ಹೊಂದಿದ. ಆತನ ಬದುಕಿನ ಕಡೆಯ ಹತ್ತು ವರ್ಷಗಳಲ್ಲಿ ಹಲವು ದುಃಖಗಳನ್ನು ಅನುಭವಿಸಿದ.
	ತಾಮಸ್ ಮೂರ್‍ನ ಸೊಗಸಾದ ಹಾಡುಗಳು, ಅವುಗಳಿಗೆ ಈತನೇ ಹಾಕಿದ ರಾಗ ಸಂಯೋಜನೆ ಈಗಲೂ ರಸಿಕರ ಮನಸ್ಸನ್ನು ಸೆಳೆಯುತ್ತವೆ. ಮೆಚ್ಚುಗೆಯನ್ನು ಗಳಿಸಿವೆ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ